B2C Blog‎ > ‎

ತುಂಗ-ಭದ್ರೆಯ ತೀರದಲ್ಲಿ "ನನ್ನ ಕನಸು"

posted May 11, 2011, 2:12 AM by Unknown user   [ updated May 11, 2011, 3:01 PM by Vivek Shivaprabhu ]

"ಆಯ್ತು ಹೋಗೋಣ ಲಿಂಗನಾಯಕನಹಳ್ಳಿಗೆ" ಎಂದು ನಿರ್ಧಾರ ಮಾಡಿದಾಗ, ಬೆಂಗಳೂರಿನಿಂದ ಸುಮಾರು 300ಕಿ.ಮೀ ದೂರವಿರುವ ಹೂವಿನಹಡಗಲಿ ತಾಲ್ಲೂಕಿನಲ್ಲಿರುವ ಲಿಂಗನಾಯಕನಹಳ್ಳಿ ಹೇಗಿದೆ, ಅಲ್ಲಿಯ ನಮ್ಮ ಕಾರ್ಯಕ್ರಮ ಹೇಗಾಗುತ್ತೆ ಅಂತ ಒಂದಿನಿತೂ ಗೊತ್ತಿರಲಿಲ್ಲ. "ನನ್ನ ಕನಸಿನ" ಮತ್ತೊಂದು ಹೆಜ್ಜೆಯಿಡಲು ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಲಿಂಗನಾಯಕನಹಳ್ಳಿಗೆ ಹೊರಟಿದ್ದ ನಮಗೆ ಅದರ ಯಶಸ್ಸಿನ ಬಗ್ಗೆ ಆತಂಕ ಮಡುವುಗಟ್ಟಿತ್ತು. ಲಗುಬಗನೆ ಹರಪನಹಳ್ಳಿಗೆ ಹೋಗಿ ಪ್ರೊಜೆಕ್ಟರ್ ತಗೊಂಡು ಬರ್ತಾಯಿದ್ದ ನಮಗೆ ದಾರಿಯುದ್ದಕ್ಕೂ ಮೈಚೆಲ್ಲಿದ್ದ ಬಳ್ಳಾರಿಯ ರಣಬಿಸಿಲು ನಮ್ಮಲ್ಲಿದ್ದ ನೀರಿನಂಶವನ್ನು ಒಂದೇ ಸಮನೆ ಹೀರ್ತಾಯಿತ್ತು. ಇನ್ನೇನು ಲಿಂಗನಾಯಕನಹಳ್ಳಿ ಬಂದೇ ಬಿಟ್ಟಿತು ಅನ್ನೋವಷ್ಟರಲ್ಲಿ ಕಾರಿನ ಹಿಂದುಗಡೆಯ ಚಕ್ರ ಪಂಕ್ಚರ್ ಆಯ್ತು. ಏನಪ್ಪಾ ಇದು ಎಂಥಾ ಸೂಚನೆ ಅಂತ ಮನದಲ್ಲಿ ಅನ್ನಿಸಿದರೂ, ಹೊಟ್ಟೆತಾಳ ಹಾಕುತ್ತಿದ್ದರಿಂದ ಅದಕ್ಕೆ ಗಮನೆ ಕೊಡದೆ, ಬೇಗಬೇಗನೆ ಚಕ್ರ ಬದಲಾಯಿಸಿ ಹೊರಟೆವು. ದೂರದಲ್ಲಿ ನೀರಿನ ಸೆಳವು ಕಾಣಿಸ್ತಾ ಇದ್ದಹಾಗೆ ಮನದಲ್ಲಿಯ ಉತ್ಸಾಹ ಇಮ್ಮಡಿಯಾಗ್ತಾಯಿತ್ತು. ಸರಿಯಾಗಿ ಮಧ್ಯಾಹ್ನ ಮೂರು ಘಂಟೆಗೆ ಲಿಂಗನಾಯಕನಹಳ್ಳಿ ಬಂದು ಸೇರಿದೆವು , ಮಠದ ಸುತ್ತಲೂ ಕಣ್ಣಾಡಿಸಿದಾಗ ಕಂಡದ್ದು ನಮ್ಮ ಉತ್ಸಾಹವನ್ನು ಮುಗಿಲು ಮುಟ್ಟಿಸಿತ್ತು, ಅದೆ ತುಂಗ-ಭದ್ರೆ ಮಠದ ಮೆಟ್ಟಿಲವರೆದು ಬಂದು ನಮಗಾಗಿ ಕಾಯ್ತಾ ಇದ್ದ ಹಾಗೆ ಇತ್ತು.ಊಟಕ್ಕಾಗಿ ಎಲ್ಲರೂ ಕಾಯ್ತಾ ಇದ್ದಿದ್ದರಿಂದ ಸಮಯ ವ್ಯರ್ಥ ಮಾಡದೆ, ಕೈ-ಕಾಲು ತೊಳೆದುಕೊಂಡು ಕೂತ ನಮಗೆ, ಬಿಸಿ ರೊಟ್ಟಿ, ಎರಡು ತರಹ ಪಲ್ಯ, ಹಸಿಮೆಣಸಿನ ಕಾಯಿ ಚಟ್ನಿ ಅನ್ನ-ಸಾರು ನಮ್ಮ ಹಸಿವನ್ನು ಸಂತೃಪ್ತ ಗೊಳಿಸಿದವು. ಊಟ ಮುಗಿಸಿ ಮಠಾಧೀಶ್ವರರನ್ನು ಮಾತಾಡಿಸಿ ದಣಿವಾರಿಸಿಕೊಳ್ಳಲು ತುಂಗ-ಭದ್ರೆಗೆ ಇಳಿದೆವು. ತುಂಗ-ಭದ್ರೆ ಎಷ್ಟೊಂದು ಕರುಣಾಮಯಿ!, ನಮ್ಮೆಲ್ಲರ ದಣಿವನ್ನು ತಾನು ಹೊತ್ತುಕೊಂಡು ತಾನುಂಟು ತನ್ನ ಗುರಿಯುಂಟು ಎಂದು ಯಾರಿಗೂ ಗೊತ್ತಾಗದ ಹಾಗೆ ದಣಿವಿಲ್ಲದೆ ಮುಂದಕ್ಕೆ ಸಾಗ್ತಾ ಇದ್ಳು. ನಾವೂ ಇವಳನ್ನು ನೋಡಿ ಕಲಿಯೋದಿದೆಯಲ್ಲ ಅಂತ ಅನ್ನಿಸದೆ ಇರಲಿಲ್ಲ.

೫.೩೦ಕ್ಕೆ ಕಾರ್ಯಕ್ರಮ ಪ್ರಾರಂಭ ಮಾಡಬೇಕಿದ್ದರಿಂದ, ನಮ್ಮೆಲ್ಲರ ಚೀಲಗಳಿಂದ ಒಂದೊಂದೆ ಸಂಬಂಧಪಟ್ಟ ಉಪಕರಣಗಳನ್ನು ತೆಗೆದು, ಕಿರುಚಿತ್ರಗಳನ್ನು ತೋರಿಸಲು ಸಿದ್ಧತೆ ಮಾಡಿಕೊಳ್ತಾ ಇದ್ದೆವು, ಆಗ ಶುರುವಾಯ್ತು ನೋಡಿ ಮಳೆ, ಎಂದೂ ಆ ತರಹ, ಮಳೆಯ ಡೊಂಬರಾಟ ನೋಡಿರಲಿಲ್ಲ, ಅಂತಹ ಆರ್ಭಟ ಕೇಳಿರಲಿಲ್ಲ. ಅಕ್ಕ-ಪಕ್ಕ ನಿಂತವರ ಮಾತೂ ಸಹ ಕೇಳದಂತಾಗಿತ್ತು. ಏನಿದು, ಕಾರ್ಯಕ್ರಮ ಪ್ರಾರಂಭಿಸುವ ಮುಂಚೆ ಈ ತರಹ ಆಗ್ತಾಯಿದೆ. ಈವತ್ತು ಕಾರ್ಯಕ್ರಮ ಮಾಡೋಕೆ ಆಗೊತ್ತೋ-ಇಲ್ವೋ ಅಂತ ಪ್ರಶ್ನೆ ನಮ್ಮೆಲ್ಲರ ಮೊಗದಲ್ಲಿ ಎದ್ದು ಕಾಣ್ತಾಯಿತ್ತು. ಆರು ಘಂಟೆ ಅಷ್ಟೊತ್ತಿಗೆ ಜನರೇಟರ್ ಆನ್ ಮಾಡಿದ್ರು,(ಇಲ್ಲಿ ಕರೆಂಟಿನ ವ್ಯವಸ್ಥೆಯಿಲ್ಲ. ಜನರೇಟರ್ರೆ ಆಗ್ಬೇಕು) ಬಲ್ಬಿನ ಬೆಳಕಿನಲ್ಲಿ ಮಕ್ಕಳಿಗೆ "ನನ್ನ ಕನಸು" ಶೀರ್ಷಿಕೆ ಕೊಟ್ಟು ಪ್ರಬಂಧ ಬರೆಯಲು ಹೇಳಿದ್ವಿ. ಪಾಪ ಮಕ್ಳು, ಇದ್ದ ಆ ಎರಡು ಬಲ್ಬಿನ ಸ್ವಲ್ಪ ಬೆಳಕಿನಲ್ಲಿ ಬರಿತಾ ಇದ್ರು, ಇತ್ತಾ ಕಡೆ ನಾವು, ಮೈಕ್, ಸ್ಪೀಕರ್ಸ್, ಪ್ರೊಜೆಕ್ಟರ್-ಗಳನ್ನೆಲ್ಲಾ ಜೋಡಿಸುತ್ತಾ ಇದ್ವಿ.ನಮ್ಮದೆಲ್ಲಾ ಪೂರ್ವ-ತಯಾರಿ ಕೆಲಸ ಮುಗಿಯುವುದಕ್ಕೂ ಮಳೆ ಆರ್ಭಟ ಕಡಿಮೆಯಾಗೋದಕ್ಕೂ ಸರಿ ಹೋಯ್ತು. ಇದು ಹೀಗೆ ಬಿಟ್ರೆ, ತುಂಬಾನೆ ತಡವಾಗುತ್ತೆ ಅಂತ ಕಾರ್ಯಕ್ರಮ ಪ್ರಾರಂಭ ಮಾಡಿಯೆ ಬಿಟ್ವಿ. ಕಾರ್ಯಕ್ರಮ ಪ್ರಾರಂಭ ಮಾಡುವ ಮುಂಚೆ ನಮಗೆ ಒಂದೇ-ಒಂದು ಸುಳಿವು ಸಹ ಸಿಕ್ಕಿರಲಿಲ್ಲ ಹೇಗಾಗಬಹುದು ಅಂತ!

ಗಲಾಟೆ ಮಾಡುತ್ತಿದ್ದ ಮಕ್ಕಳಿಗೆ ಸಂಚಾಲಕರಿಂದ ಮಾತಿನ ಮೂಲಕ ಸರಿಯಾಗಿಯೆ ಪೂಜೆ ಆಯ್ತು, ಅವರು ತಮ್ಮ ಬತ್ತಳಿಕೆಯಲ್ಲಿನ ಅಸ್ತ್ರಗಳನ್ನು ಉಪಯೋಗಿಸಲೇ ಬೇಕಾಯ್ತು ಸುಮ್ಮನಿರಿಸಲು! ನಿಧಾನವಾಗಿ ಮಕ್ಕಳ ಆಸಕ್ತಿಯನ್ನ ನಮ್ಮೆಡೆ ಸೆಳೆಯಲು ಯಶಸ್ವಿ ಆದೆವು. ಮುಂದೆ ನಡೆದದ್ದು ಒಂದು ಇತಿಹಾಸ! ಹೌದು! ಅಲ್ಲಿದ್ದ ಹಳ್ಳಿಯ ಮಕ್ಕಳು ನಮ್ಮ ಎಣಿಕೆ ಮೀರಿ ಭಾಗಿಯಾದ್ರು. ಅಂದುಕೊಂಡಿದ್ದಕ್ಕಿಂತ ಅಭೂತಪೂರ್ವ ಉತ್ತರ ಎಲ್ಲರಿಂದ ಬಂತು. ಕಿರುಚಿತ್ರ ತೋರ್ಪಡಿಸಿದ ಮೇಲೆ ನಡೆಯುತ್ತಿದ್ದ ಸಂವಾದದಲ್ಲಿ ಅವರು ಮಾತಾಡ್ತಾ ಇದ್ರೆ ನಾವೆಲ್ಲಾ ದಂಗಾಗಿ ನೋಡ್ತಾ ನಿಲ್ಲದಿರಲಿಲ್ಲ. ಕುವೆಂಪು ಅವರು ಹಾಗೆ ಹೇಳಿದ್ರು, ಬಸವಣ್ಣನವರು ಹೀಗೆ ಹೇಳಿದ್ರು, ಆ ಗಾದೆ ಮಾತು ಹೀಗೆ, ಈ ಗಾದೆ ಮಾತು ಹಾಗೆ ಅಂತ ನುಡಿಗಟ್ಟುಗಳನ್ನು ಆ ಕ್ಷಣದಲ್ಲಿ ತಮ್ಮ ಮಾತಿನ ಲಹರಿಯಲ್ಲಿ ಸೇರಿಸಿ ಹೇಳ್ತಾ ಇದ್ರೆ, ನಾವು ಖುಷಿಯಲ್ಲಿ ತೇಲಿ ಹೋದ್ವಿ. ಮಳೆ ಯಾವಾಗ ನಿಲ್ತು ಅಂತ ಯಾರಿಗೂ ಗೊತ್ತೇ ಆಗಲಿಲ್ಲ!. ಬೆಂಗಳೂರಿನ ಶಾಲೆಗಳಲ್ಲಿ ಸಹ ಕಾರ್ಯಕ್ರಮ ಮಾಡಿದ್ವಿ, ಆದರೆ ಈ ತರಹ ನಮ್ಮ ಮಣ್ಣಿನ-ಕನ್ನಡ-ಸಂಸ್ಕೃತಿ-ಸೊಗಡಿನ ಗಮ್ಮತ್ತು ನಮಗೆ ತಾಕಿರಲಿಲ್ಲ. ಅದಾದ ನಂತರ, ಕಿರುಚಿತ್ರ ಹೇಗೆ ಮಾಡಿದ್ವಿ ಅಂತ ಹೇಳಲಾಯ್ತು, ಆಸಕ್ತಿ ಇರೋರಿಗೆ ಗೊತ್ತಾಗಲಿ ಎಂಬ ಸದುದ್ದೇಶದಿಂದ. ನಂತರ ಕೊನೆಯಲ್ಲಿ, ಯಾವುದೇ ಕಾರಣಕ್ಕೂ ಮನೆಯನ್ನಾಗಲಿ, ತಂದೆ-ತಾಯಿಯನ್ನಾಗಲಿ ತೊರೆದು ಪಟ್ಟಣಕ್ಕೆ ಬಂದು ಸಿನಿಮಾ ಸೇರುವ ಗೀಳು ಬೆಳೆಯಿಸಿಕೊಳ್ಳಬೇಡಿ ಅಂತ ಕಿವಿಮಾತನ್ನೂ ಹೇಳಲಾಯ್ತು. ಅಂದಿನ ಕಾರ್ಯಕ್ರಮಕ್ಕೆ ತೆರೆ ಬಿದ್ದ ಮೇಲೆ, ಮಕ್ಕಳೆಲ್ಲಾ ಗುಂಪು-ಗುಂಪಾಗಿ ನಮ್ಮನ್ನೆಲ್ಲಾ ಸುತ್ತುವರಿದು ಅವರ ಪ್ರಶ್ನೆಗಳಿಂದ,ಮುಗ್ಧ ಮಾತುಗಳಿಂದ ನಮ್ಮನ್ನೆಲ್ಲಾ ತೋಯಿಸಿಬಿಟ್ರು.

ನಂತರ, ಅದೇ ಖುಷಿಯಲ್ಲಿ ಎಲ್ಲರೂ ಸಂತೃಪ್ತಿಯಿಂದ ಊಟ ಮಾಡಿ, ಅವರುಗಳು ಬರೆದಿದ್ದ "ನನ್ನ ಕನಸು" ಪ್ರಬಂಧವನ್ನ ಮೌಲ್ಯಮಾಪನ ಮಾಡಲು ಶುರು ಮಾಡಿದ್ವಿ ಆದರೆ, ಅಷ್ಟರಲ್ಲಿ ಮಠದ ಹುಡುಗ ಬಂದು ಹೇಳಿದ್ದು ಏನ್ ಮಾಡೋದು ಅಂತ ಯೋಚಿಸುವಂತೆ ಮಾಡಿತ್ತು. "ಜನರೇಟರ್ ಆಫ್ ಮಾಡ್ತಾರೆ ಈಗ, ಕರೆಂಟ್ ಹೋಗುತ್ತೆ" ಅಂದ. ಕ್ಯಾಂಡಲ್ ಹಚ್ಚಿ ಕೊಂಡು ಇಷ್ಟು ಜನ ಮೌಲ್ಯಮಾಪನ ಮಾಡೋದು ಕಷ್ಟ ಅಂತ ಅವರಿಗೆ ಕೇಳಿದ್ದಕ್ಕೆ, ಮಠದ ಹೊರಗಡೆ ಒಂದು ಬಲ್ಬ್ ಹಾಕಿ ಕೊಟ್ರು, ಅವರೆಲ್ಲಾ ಮುಂಜಾನೆ ೪ಕ್ಕೆ ಎದ್ದೇಳುತ್ತಿದ್ದರಿಂದ ಜನರೇಟರ್ ನಮಗೆ ಆಫ್ ಮಾಡಲು ತೋರಿಸಿ ಹತ್ತು ಘಂಟೆಗೆ ಎಲ್ಲರೂ ಮಲಗಲು ಹೋದರು. ಪ್ರಬಂಧವನ್ನು ಒಬ್ಬರಿಂತ ಒಬ್ಬರು ವಿಭಿನ್ನವಾಗಿ ಬರೆದಿದ್ದರು, ಕೆಲವರದಂತೂ ವಯಸ್ಸಿಗೆ ಮೀರಿದ ಪ್ರೌಢಮೆ ಅವರ ಬರಹದಲ್ಲಿತ್ತು. ಸಾಕಷ್ಟು ನುಡಿಗಟ್ಟುಗಳು, ಗಾದೆ ಮಾತುಗಳು "ನನ್ನ ಕನಸಿ"ನಲ್ಲಿ ಕುಣಿದು-ಕುಪ್ಪಳಿಸುತ್ತಾ ಇದ್ದವು. ಮೊದಲು ಎರಡು ಪ್ರಶಸ್ತಿಗಳನ್ನು ಕೊಡಬೇಕೆಂದುಕೊಂಡಿದ್ದ ನಮಗೆ, ಅವುಗಳನ್ನು ನೋಡಿ ಇನ್ನೂ ೪ ಬರಹಗಳಿಗೆ ಕೊಡದೆ ಇರಲು ಮನಸ್ಸು ಬರಲಿಲ್ಲ. ಎಲ್ಲರ ಬರಹಗಳನ್ನು ಓದುತ್ತಾ ತುಂಬಾನೆ ಖುಷಿಯಾಯ್ತು. ಕೊನೆಗೆ ೧೨ ಘಂಟೆಗೆ ನೆಮ್ಮದಿಯಿಂದ ನಿದ್ದೆ ಹೋದ್ವಿ.

ಮರುದಿನ ಮಕ್ಕಳೆಲ್ಲಾ ಬೇಗನೆ ಎದ್ದು ಪ್ರಾರ್ಥನೆ ಮಾಡಿ, ಯೋಗ ಮಾಡಲು ಹೋದರು. ನಾವು ನೋಡೋಣ ಅಂತ ಹೋದ್ವಿ, ೧೧ ವರುಷದ ಹುಡುಗ ಎಲ್ಲರಿಗೂ ಯೋಗ ಹೇಳಿಕೊಡುತ್ತಲಿದ್ದ! ಆ ಹುಡುಗನಿಗೆ ಎಲ್ಲಾ ಆಸನಗಳನ್ನು ನೀರು ಕುಡಿದಂತೆ ಮಾಡ್ತಾನೆ ಅಂತ ಮಠದ ಗೋಡೆಗೆ ಹಾಕಿದ್ದ ಅವನ ಫೋಟೋಗಳು ಕೂಗಿ ಹೇಳ್ತಾ ಇದ್ದದ್ದು ಆಮೇಲೆ ನಮ್ಮ ಗಮನಕ್ಕೆ ಬಂತು. ನಾವೆಲ್ಲಾ ಮೇಲಿನಿಂದ ನೋಡುತ್ತಾ ನಿಂತಿದ್ದರಿಂದ, ಮಕ್ಕಳೆಲ್ಲಾ ಹಾಕಿದ್ದ ಬಣ್ಣ-ಬಣ್ಣದ ಬಟ್ಟೆಗಳನ್ನು ನೋಡುತ್ತಾ ಮುಗಿಲ ತೊರೆದು ಕಾಮನಬಿಲ್ಲು ಧರೆಗಿಳಿದಂತಿತ್ತು! ನಂತರ ತುಂಗೆ-ಭದ್ರೆಗೆ ನಮ್ಮ ನಿದ್ದೆ, ನಮ್ಮ ಕೊಳಕನ್ನು ಕೊಟ್ಟು ಉಲ್ಲಸಿತರಾದ್ವಿ. ನದಿತೀರದಲ್ಲಿ ಜಬರ್-ದಸ್ತಾಗಿ ತಿಂಡಿತಿನ್ನುತ್ತಾ ನವಿಲು ಆ ಕಡೆ ದಡದಿಂದ ಈ ಕಡೆ ದಡಕ್ಕೆ ಹಾರೋದು ನೋಡಿ ಖುಷಿ ಪಟ್ವಿ

ನಂತರ ರಸ-ಪ್ರಶ್ನೆ ಕಾರ್ಯಕ್ರಮ ನಡೆಸಿದಾಗ ಅಲ್ಲೂ ಹಾಗೆ ಪ್ರತಿಕ್ರಿಯೆ ಮೂಡಿಬಂತು.ದೇಶಕ್ಕಾಗಿ ಮಡಿದವರು ಇನ್ನೂ ನೆನಪಲ್ಲಿ ಉಳಿದಿದ್ದಾರೆ ಅಂತ ಅಂದ್ರೆ ಅದು ಹಳ್ಳಿ ಮಕ್ಕಳಲ್ಲಿ ಅಂದ್ರೆ ತಪ್ಪಾಗಲಾರದು. ನಾಲ್ಕು ತಂಡಗಳಾಗಿ ವಿಂಗಡಿಸಿ, ತಂಡಕ್ಕೆ ಒಬ್ಬರನ್ನು ನಾಯಕನನ್ನಾಗಿ/ನಾಯಕಿಯನ್ನಾಗಿ ಆರಿಸಿ, ತಂಡಕ್ಕೆ ಹೆಸರನ್ನು ಸಹ ಸೂಚಿಸಿ ಅಂತ ಹೇಳಿದ್ವಿ. ನಾಯಕರನ್ನು ಆರಿಸಿದ್ರು, ಜೊತೆಗೆ ತಂಡದ ಹೆಸರುಗಳನ್ನು ಹೇಳಿದರು. "ಬಸವಣ್ಣ", "ಅಬ್ದುಲ್ ಕಲಾಂ", "ಚನ್ನ ಚೈತನ್ಯ", "ಸರ್ ಸಿ.ವಿ ರಾಮನ್" ಅಂತ ಹೆಸರಿಟ್ಟ ಆ ಮಕ್ಕಳೆಲ್ಲಿ, ಸಿನಿಮಾ ತಾರೆಯರ, ಸಿನಿಮಾಗಳ ಹೆಸರಿಟ್ಟ ಬೆಂಗಳೂರಿನ ಮಕ್ಕಳೆಲ್ಲಿ?

ರಸಪ್ರಶ್ನೆಯಲ್ಲಿ ದೇಶಕ್ಕಾಗಿ ಹೋರಾಡಿದ ನಾಯಕರುಗಳನ್ನು, ಸಾಹಿತಿಗಳನ್ನು, ಸ್ಮಾರಕಗಳ ಹೆಸರುಗಳನ್ನು ನಾಲಿಗೆಯ ತುದಿಯಲ್ಲಿ ಇಟ್ಟುಕೊಂಡವರಂತೆ ಉತ್ತರಿಸುತ್ತಿದ್ರು, ಯಶಸ್ವಿ ರಸಪ್ರಶ್ನೆಯೊಂದಿಗೆ ನಮ್ಮ ಎರಡೂ ಕಾರ್ಯಕ್ರಮಗಳು ಮುಗಿದವು. ನಂತರ, ಮಠದವರು ಬೀಳ್ಕೊಡುಗೆ ಮಾಡುತ್ತಾ ಶಾಲು, ಸ್ಮರಣಿಕೆ ಕೊಟ್ಟದ್ದು ನಮಗೆಲ್ಲಾ ಮುಜುಗರ ಉಂಟುಮಾಡಿತ್ತು. ನಾವೆಲ್ಲಾ ಮಠದ ಅವಿಭಾಜ್ಯ ಅಂಗವೆಂದು, ಇನ್ಮೆಂದೆ ಪ್ರತಿ ಬೇಸಿಗೆ ಶಿಬಿರಕ್ಕೆ ನಾವು ಬರಬಹುದೆಂದು ಘಂಟಾ-ಘೋಷದಿಂದ ಮಠಾಧೀಶ್ವರರು ಖುಷಿಯಿಂದ ಹೇಳ್ತಾಯಿದ್ರೆ, ನಮ್ಮೆಲ್ಲರ ಮನಸ್ಸು ಎಲ್ಲೆ ಮೀರಿತ್ತು.

ಚೆನ್ನಾಗಿ ನದಿ ತೀರದಲ್ಲಿ ಊಟಮಾಡಿ, ಹೊರಡಲು ತಯಾರಾದ್ವಿ. ಮಕ್ಕಳೆಲ್ಲಾ ಆಟೋಗ್ರಾಫ್ ಬೇಕೆಂದು ಅವಸರದಿ ಬಂದಾಗ,"ಆಟೋಗ್ರಾಫ್ ಕೊಡೋವಷ್ಟು ದೊಡ್ಡವರು ನಾವಲ್ಲ, ಅಂದರೂ ಅವರು ಕೇಳಲಿಲ್ಲ". ಅಲ್ಲಿದ್ದ ಪ್ರಕೃತಿ, ಆ ಹಸಿರು, ತುಂಗ-ಭದ್ರೆ, ಮಠ, ಮುಗ್ಧ ಮನಸುಗಳನ್ನು ನೋಡಿ ನಮ್ಮೆಲ್ಲರ ಮನಸ್ಸೂರೆಗೊಂಡ್ತು. ಮತ್ತೆ ಬರುತ್ತೇವೆ ಅಂತ ಹೇಳುತ್ತಾ ಮರುದಿನ ಆಫೀಸು, ಬೇಗ ಬೆಂಗಳೂರಿಗೆ ಹೋಗ್ಬೇಕು ಅಂತ ಅವಸರವನ್ನ ಅಪ್ಪಿಕೊಂಡು ವಾಪಾಸು ಹೊರಟ್ವಿ.

ಬೈಟೂ ಕಾಫೀ ಫಿಲ್ಮ್ಸ್ ಮತ್ತು ನಿರಂತರ ಫೌಂಡೇಷನ್ ಪರವಾಗಿ

~ಅಮರ್

Comments